Twaha Logo

Twaha

← Back to Articles

ಝಂ ಝಂ: ವಿಜ್ಞಾನಿಗಳನ್ನೂ ಬೆರಗುಗೊಳಿಸಿದ ಅದ್ಭುತ ಜಲನಿಧಿ

By M.A. Ismail Naeemi Mangalapete

7/21/2025

Zam Zam well image

#ಝಂ_ಝಂ: #ವಿಜ್ಞಾನಿಗಳನ್ನೂ_ಬೆರಗುಗೊಳಿಸಿದ_ಅದ್ಭುತ_ಜಲನಿಧಿ

ಝಂ ಝಂ ಜಲವು ಅಲ್ಲಾಹನ ಮಹಾ ದೃಷ್ಟಾಂತಗಳಲ್ಲೊಂದು. ಪವಿತ್ರ ಕ'ಅ್'ಬಾಲಯದ ಸನಿಹ ಈ ಪವಿತ್ರ ಬಾವಿಯು ನೆಲೆಗೊಂಡಿದ್ದು ವಿಶ್ವದ ಹಲವು ಅದ್ಭುತಗಳ ಪೈಕಿ ಇದೂ ಒಂದು. ಝಂಝಂ ಜಲದ ಮೂಲವನ್ನು ಇದುವರೆಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲವೆನ್ನುವುದು ಒಂದು ಮಹಾ ಅಚ್ಚರಿ. ಈ ನಿಗೂಢತೆಯನ್ನು ಭೇದಿಸಲು ಹಲವರು ಶತಾಯಗತಾಯ ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲವೆನ್ನುವುದು ಸತ್ಯ.
ಪ್ರವಾದಿ ಇಬ್ರಾಹೀಂ ಅಲೈಹಿ ಸ್ಸಲಾಂ ರವರು ಪತ್ನಿ ಹಾಜರಾ ರಳಿಯಲ್ಲಾಹು ಅನ್ಹಾ ಮತ್ತು ಮಗುವನ್ನು ಅಲ್ಲಾಹನ ಆಜ್ಞೆ ಮೇರೆಗೆ ಮಕ್ಕಾದ ಬಂಜರು ಮರುಭೂಮಿಯಲ್ಲಿ ಬಿಟ್ಟು ಬರುವಾಗ ಹೀಗೆ ಪ್ರಾರ್ಥಿಸಿದ್ದರು.
“ನಮ್ಮಪ್ರಭೂ, ನಾನು ನನ್ನ ಸಂತತಿಯಿಂದ ( ಕೆಲವರನ್ನು ) ಒಂದು ಬಂಜರು ಕಣಿವೆಯಲ್ಲಿ ನಿನ್ನ ಪವಿತ್ರ ಗೇಹದ ಬಳಿ ತಂದು ನೆಲೆಗೊಳಿಸಿದ್ದೇನೆ. ನಮ್ಮ ಪ್ರಭು, ಇವರು ನಮಾಝನ್ನು ಸಂಸ್ಥಾಪಿಸಲೆಂದು ಹೀಗೆ ಮಾಡಿದ್ದೇನೆ. ಆದುದರಿಂದ ನೀನು ಜನರಲ್ಲಿ ಕೆಲವರ ಮನಸ್ಸುಗಳನ್ನು ಇವರ ಕಡೆಗೆ ಒಲಿಯುವಂತೆ ಮಾಡು ಮತ್ತು ಇವರಿಗೆ ಹಣ್ಣು ಫಲಗಳನ್ನು ನೀಡು, ಇವರು ಕೃತಜ್ಞರಾಗಲೂ ಬಹುದು.(14:37)

ಪ್ರವಾದಿ ಇಬ್ರಾಹೀಂ ಅಲೈಹಿಸ್ಸಲಾಂ ರವರ ಪ್ರಾರ್ಥನೆಯ ಫಲವೆಂಬಂತೆ ಲಭಿಸಿದ ವಿಶಿಷ್ಟ ಜಲವಾಗಿತ್ತು ಝಂಝಂ. ಇದನ್ನು ಜಲವೆಂದೂ ಕರೆಯುತ್ತಾರಾದರೂ ವಾಸ್ತವದಲ್ಲಿ ಇದೊಂದು ಆಹಾರ. ಜಲವು ಮನುಷ್ಯನ ದಾಹವನ್ನಷ್ಟೇ ಇಂಗಿಸುತ್ತದೆ, ಹಸಿವನ್ನಲ್ಲ. ಆದರೆ ಈ ಪವಿತ್ರ ಜಲವು ದಾಹದೊಂದಿಗೆ ಹಸಿವನ್ನೂ ತಣಿಸಿ ಬಿಡುತ್ತದೆ. ಅದೆಷ್ಟೋ ಮಹಾತ್ಮರು ಬರೀ ಝಂಝಂ ಕುಡಿದು ಬದುಕಿದ್ದಿದೆ.
ಝಂಝಂ ಅನುಗ್ರಹಪೂರಿತವೂ, ಹಸಿವನ್ನು ತಣಿಸುವ ಆಹಾರವೂ, ರೋಗ ನಿವಾರಕ ಸಿದ್ದೌಷಧವೂ ಆಗಿದೆ. ಒಬ್ಬರು ಹಸಿವನ್ನು ತಣಿಸಲೆಂದು ಕುಡಿದರೆ ಅಥವಾ ರೋಗ ಶಮನಕ್ಕಾಗಿಯೋ ಇತರ ಅಗತ್ಯಗಳನ್ನು ಪೂರೈಸಲೆಂದೋ ಕುಡಿದರೆ ಅವೆಲ್ಲವೂ ಈಡೇರುವುದು. ಅದನ್ನು ನಮಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ರವರೇ ತಿಳಿಸಿ ಕೊಟ್ಟಿದ್ದಾರೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, "ಝಂಝಂ ಜಲವನ್ನು ಯಾವ ಉದ್ದೇಶಕ್ಕಾಗಿ ಕುಡಿಯುತ್ತೀರೋ ಅದು ನೆರವೇರುವುದು"

#ಝಂಝಂ_ಹೆಸರಿನ_ಹಿನ್ನೆಲೆ
ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; "ಅಲ್ಲಾಹನು ಇಸ್ಮಾಈಲರ ತಾಯಿಯ ಮೇಲೆ ಕರುಣೆ ತೋರಲಿ. ಒಂದು ವೇಳೆ ಅವರು ನೀರನ್ನು ತಡೆಯದೇ ಇರುತ್ತಿದ್ದರೆ ಅದು ಭೂಮಿಯಿಡೀ ಹರಿಯುತ್ತಿತ್ತು," (ಸ್ವಹೀಹುಲ್ ಬುಖಾರಿ).
ಚಿಮ್ಮಿ ಬಂದ ನೀರು ಉಕ್ಕಿ ಹರಿಯ ತೊಡಗಿದಾಗ ಹಾಜರಾ ರಳಿಯಲ್ಲಾಹು ಅನ್ಹಾ ರವರು ಆನಂದ ತುಂದಿಲರಾಗಿ ' ಝಂಝಂ' ( ನಿಲ್ಲು ನಿಲ್ಲು ) ಎಂದೆನ್ನುತ್ತಾರೆ. ಒಂದು ವೇಳೆ ಹಾಜರಾ ರಳಿಯಲ್ಲಾಹು ಅನ್ಹಾರವರು ಹಾಗೆ ಹೇಳದೆ ಇರುತ್ತಿದ್ದರೆ ಇಡೀ ಭೂಮುಖವೇ ನೀರಿನಿಂದ ಆವೃತವಾಗುತ್ತಿತ್ತೋ ಏನೋ?
ನೀರು ಸಿಕ್ಕಿದ ಆ ಸಂತೋಷದ ಸಂದರ್ಭದಲ್ಲಿ ಹಾಜರಾ ಬೀವಿಯೊಂದಿಗೆ ಜಿಬ್ರೀಲರು ಹೀಗೆ ಹೇಳಿದ್ದರು. "ಈ ಜಲವು ಮುಗಿದು ಹೋಗುವುದೆಂದು ತಾವು ಭಯ ಪಡದಿರಿ. ಇಲ್ಲಿ ಅಲ್ಲಾಹನ ಭವನವಿದೆ. ಈ ಮಗು ಮತ್ತು ಮಗುವಿನ ತಂದೆ ಇದನ್ನು ಪುನ: ನಿರ್ಮಾಣಗೈಯ್ಯುವರು. ಈ ಜಲವನ್ನು ಅಲ್ಲಾಹನ ಅತಿಥಿಗಳು ಬಂದು ಕುಡಿಯುವರು" ನಂತರದ ದಿನಗಳಲ್ಲಿ ಪ್ರವಾದಿ ಇಬ್ರಾಹೀಮ್ ಅಲೈಹಿ ಸ್ಸಲಾಂ ಮತ್ತು ಪ್ರವಾದಿ ಇಸ್ಮಾಈಲ್ ಅಲೈಹಿಸ್ಸಲಾಂ ರವರು ಜತೆಗೂಡಿ ಕ'ಅ್'ಬಾಲಯವನ್ನು ಪುನರ್ನಿರ್ಮಾಣಗೈಯ್ಯುತ್ತಾರೆ. ಕೆಲಸ ಪೂರ್ಣಗೊಂಡ ಬಳಿಕ ಇಬ್ರಾಹೀಮ್ ಅಲೈಹಿಸ್ಸಲಾಂ ರವರು ಪ್ರಾರ್ಥಿಸುತ್ತಾ, ವಿಶ್ವ ಜನತೆಯನ್ನು ತಮ್ಮೆಡೆಗೆ ಆಹ್ವಾನಿಸುತ್ತಾರೆ. ಅಂದು ಕರೆದಾಗ ಯಾರೆಲ್ಲಾ ಲಬ್ಬೈಕ್ ಎಂದು ಓಗೊಟ್ಟಿರುವರೋ, ಅವರೆಲ್ಲರೂ ಹಜ್ಜ್ ನಿರ್ವಹಿಸಲು ಅಲ್ಲಾಹನ ಅತಿಥಿಗಳಾಗಿ ಮಕ್ಕಾಕ್ಕೆ ತೆರಳುವರು. ಜಿಬ್ರೀಲ್ ಅಲೈಹಿ ಸ್ಸಲಾಂ ರವರು ಹೇಳಿದಂತೆ ಅಲ್ಲಾಹನ ಅತಿಥಿಗಳು ಬಂದು ಝಂಝಂ ಜಲವನ್ನು ಈಗಲೂ ಕುಡಿಯುತ್ತಿದ್ದಾರೆ. ಅಂತ್ಯದಿನದವರೆಗೂ ಕುಡಿಯುತ್ತಿರುತ್ತಾರೆ .

#ಪವಿತ್ರ_ಜಲದ_ವಿಶಿಷ್ಟ_ನಾಮಗಳು
ಝಂ ಝಂ ಗೆ 'ಬರಕತ್', 'ಮುಬಾರಕ್' ಎಂಬ ಹೆಸರಿದೆ. ಬರಕತ್ ಎಂದರೆ ಸಮೃದ್ಧಿ , ಅಭಿವೃದ್ಧಿ, ಉನ್ನತಿ ಮುಂತಾದ ಅರ್ಥಗಳಿವೆ. ಝಂ ಝಂ ಜಲವು ಎಂದೂ ಬತ್ತದೆ ಸದಾ ಸಮೃದ್ಧಪೂರ್ಣವಾಗಿರುವುದರಿಂದ ಈ ಹೆಸರು ಹೆಚ್ಚು ಅನ್ವರ್ಥವೆನಿಸುತ್ತದೆ. ಅದೇ ರೀತಿ ಝಂ ಝಂಗೆ 'ಹರಮಿಯ್ಯ' ಎಂಬ ಹೆಸರೂ ಕೂಡ ಇದೆ. ಪವಿತ್ರವಾದ ಹರಂ ಶರೀಫಲ್ಲಿರುವುದರಿಂದ ಈ ಹೆಸರು ಬಂದಿದೆ. ಹಲವು ವಿದ್ವಾಂಸರು ಪವಿತ್ರ ಮತ್ತು ಸಂಶುದ್ದವಾದುದು ಎಂಬ ಅರ್ಥ ಕಲ್ಪನೆಯನ್ನು ಈ ಹೆಸರಿಗೆ ನೀಡಿದ್ದಾರೆ.
'ಬುಶ್ರಾ' ಇದೂ ಕೂಡ ಝಂ ಝಂಗಿರುವ ಮತ್ತೊಂದು ಹೆಸರು. ಬುಶ್ರಾ ಎಂದರೆ ಶುಭ ಸುದ್ದಿ ಎಂದರ್ಥ. ಪುತ್ರ ಇಸ್ಮಾಈಲ್ ಅಲೈಹಿ ಸ್ಸಲಾಂ ದಾಹದಿಂದ ಕಂಗೆಟ್ಟು, ರಚ್ಚೆ ಹಿಡಿದು ಅಳುತ್ತಿದ್ದಾಗ ಕಳವಳಗೊಂಡಿದ್ದ ಹಾಜರಾ ಬೀವಿ ರಳಿಯಲ್ಲಾಹು ಅನ್ಹಾ ರವರ ಪಾಲಿಗೆ ಶುಭ ಸೂಚಕವಾಗಿ ಝಂ ಝಂ ಚಿಮ್ಮಿತು. ಈ ಕಾರಣದಿಂದ ಈ ಹೆಸರು ಬಂದಿದೆ.
ಅದೇ ರೀತಿ ' ಬರ್ರ್' ಎಂಬ ಹೆಸರು ಝಂ ಝಂ ಗೆ ಇದೆ. ಯಥೇಚ್ಚ ಒಳಿತನ್ನು ಮಾಡುವುದು ಎಂದರ್ಥ. ಝಂ ಝಂನಿಂದ ಸತ್ಯ ವಿಶ್ವಾಸಿಗಳಿಗೆ ಧಾರಾಳ ಒಳಿತಿರುವುದರಿಂದ ಈ ಹೆಸರು ಹೆಚ್ಚು ಹೊಂದಿಕೊಳ್ಳುತ್ತದೆ.
'ಸಾಬಿಖ್' ಎಂದರೆ ಮುನ್ನಡೆದದ್ದು. ಮುಂದೆ ದಾಟಿ ಹೋದದ್ದು ಎಂದರ್ಥ. ಇತರ ಜಲಕ್ಕಿಂತ ಹೆಚ್ಚು ಮುನ್ನಡೆ ಯಲ್ಲಿರುವ ಜಲವಾದ್ದರಿಂದ ಈ ಹೆಸರು ಝಂಝಂ ಗೆ ಇದೆ. ಆದರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕೈ ಬೆರಳುಗಳ ಮಧ್ಯದಿಂದ ಪ್ರವಹಿಸಿದ ಜಲವು ಝಂ ಝಂ ಜಲಕ್ಕಿಂತಲೂ ಶ್ರೇಷ್ಠವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಅದೇ ರೀತಿ ಇದಕ್ಕೆ ಹಫೀರತು ಅಬ್ದಿಲ್ ಮುತ್ತಲಿಬ್ ಎಂಬ ಹೆಸರೂ ಇದೆ. ಕೆಲವು ವರ್ಷಗಳ ಕಾಲ ಝಂ ಝಂ ಬಾವಿಯು ಮಣ್ಣಿನಿಂದ ಆವೃತಗೊಂಡು ಜನರ ಕಣ್ಣಿನಿಂದ ಮರೆಯಾಗಿತ್ತು. ನಂತರ ಅದನ್ನು ಅಬ್ದುಲ್ ಮುತ್ತಲಿಬರು ತೋಡಿದರು. ಈ ಕಾರಣದಿಂದ ಈ ಹೆಸರು ಬಂದಿದೆ. ಹೀಗೆ ಹಲವು ಹೆಸರುಗಳು ಝಮ್ ಝಮ್ ಗೆ ಇವೆ.

#ಕಾಪಟ್ಯ_ನೀಗಿಸುವ_ಜಲ
ಝಂ ಝಂ ಜಲವನ್ನು ಹೆಚ್ಚು ಹೆಚ್ಚು ಕುಡಿದಷ್ಟು ಮನದೊಳಗಿನ ಕಾಪಟ್ಯ ನಿವಾರಣೆಯಾಗುವುದು. ಜೊತೆಗೆ ವಿಶ್ವಾಸ ದೃಢ ಗೊಳ್ಳುವುದು. ಪ್ರವಾದಿ ಸ್ವಲ್ಲಲ್ಲಾಹು ಅಲೈಃ ವಸಲ್ಲಮರು ಝಂಝಂ ಜಲವನ್ನು ಹೆಚ್ಚಾಗಿ ಕುಡಿಯುತ್ತಿದ್ದರು.
ಈ ಪವಿತ್ರ ಜಲವು ಸತ್ಯ ವಿಶ್ವಾಸಿಗಳು ಮತ್ತು ಕಪಟ ವಿಶ್ವಾಸಿಗಳು ಯಾರು ಎಂಬುದನ್ನು ಬೇರ್ಪಡಿಸಿ ಕೊಡುತ್ತದೆ. ಯಾರು ಈ ಜಲವನ್ನು ಹೆಚ್ಚು ಹೆಚ್ಚು ಕುಡಿಯಲು ಹಾತೊರೆಯುತ್ತಾರೋ ಅವರೊಳಗೆ ಸತ್ಯ ವಿಶ್ವಾಸ ದೃಢ ವಾಗಿದೆ ಎಂದರ್ಥ. ಕಪಟ ವಿಶ್ವಾಸಿಗಳಂತೂ ಈ ಜಲವನ್ನು ಕುಡಿಯಲು ಉತ್ಸುಕತೆ ತೋರಲಾರರು. " ನಮಗೆ ಮತ್ತು ಕಪಟ ವಿಶ್ವಾಸಿಗಳ ಮಧ್ಯೆ ಇರುವ ಸ್ಪಷ್ಟವಾದ ವ್ಯತ್ಯಾಸ ವೆಂದರೆ, ಅವರು ಝಂಝಂ ಜಲದಿಂದ ಹೊಟ್ಟೆ ತುಂಬಿಸಲು ಪ್ರಯತ್ನಿಸಲಾರರು ಎನ್ನುವುದು." ಹೀಗೊಂದು ಹದೀಸ್ ಇದನ್ನು ನಮಗೆ ತಿಳಿಸಿ ಕೊಡುತ್ತದೆ.

#ಝಂ_ಝಂ_ಬಾವಿ_ಮುಚ್ಚಿದವರು_ಯಾರು?
ಹಾಜರಾ ಬೀವಿ ರಳಿಯಲ್ಲಾಹು ಅನ್ಹಾ ರವರು ಝಂಝಂ ಜಲವನ್ನು ಕುಡಿಯುತ್ತಾ ಮಗುವನ್ನು ಲಾಲಿಸಿ, ಪೋಷಿಸಿ ಸುಖವಾಗಿ ಜೀವಿಸುತ್ತಿರುವಾಗ ಅಲ್ಲಿಗೆ ಜುರ್ಹೂಂ ಗೋತ್ರದವರು ಆಗಮಿಸುತ್ತಾರೆ. ಅವರು ಕದಾಅ್ ಎಂಬ ನಾಡಿನಿಂದ ಹೊರಟು ಮಕ್ಕಾದ ಸಮೀಪಕ್ಕೆ ಬಂದಾಗ ಆ ಬಂಜರು ಮರುಭೂಮಿಯ ದೂರದಲ್ಲೊಂದು ಕಡೆ ಹಕ್ಕಿಗಳು ಹಾರುತ್ತಿರುವುದನ್ನು ಗಮನಿಸಿದರು. ಬಹುಶಃ ನೀರಿನ ಒರತೆ ಇರುವುದರಿಂದಲೇ ಹಕ್ಕಿಗಳು ಹಾರಾಡುತ್ತಿದೆ ಎಂದು ಭಾವಿಸಿದ ಅವರು ಅದನ್ನು ಖಚಿತ ಪಡಿಸಲು ಇಬ್ಬರು ದೂತರನ್ನು ಅಲ್ಲಿಗೆ ಕಳುಹಿಸಿದರು. ಅವರು ಬಂದು ಝಂಝಂ ಜಲವನ್ನು ಕಂಡು, ಅದನ್ನು ಹಾಗೆಯೇ ಗೋತ್ರದವರಿಗೂ ತಿಳಿಸಿದರು.

ಇಡೀ ಜುರ್ಹೂಮ್ ಗೋತ್ರವು ಝಮ್ ಝಮ್ ಬಾವಿ ಇರುವ ಸ್ಥಳಕ್ಕೆ ಬಂದು, ಹಾಜರಾ ಬೀವಿ(ರ.ಅ)ರವರಲ್ಲಿ ಸಮ್ಮತಿ ಕೇಳಿ ಅಲ್ಲಿ ಡೇರೆಗಳನ್ನು ಹಾಕಿ ವಾಸಿಸತೊಡಗಿತು. ಅದು ನಿರ್ಜನ ಹಾಗೂ ಬಂಜರು ಮರುಭೂಮಿಯಲ್ಲಿ ಹೊಸ ನಾಗರಿಕತೆಯೊಂದರ ಹುಟ್ಟಿಗೆ ನಾಂದಿಯಾಯಿತು. ಬರು ಬರುತ್ತಾ ಪವಿತ್ರ ಕ'ಅ್'ಬಾಲಯದ ಪಂಚಾಂಗವು ನೆಲಗೊಳ್ಳುವ ಸುತ್ತಮುತ್ತಲ ಪ್ರದೇಶವೂ ಸಂಪದ್ಭರಿತವಾಗಿ ಬೆಳೆಯುತ್ತಾ ವಿಸ್ತಾರಗೊಳ್ಳತೊಡಗಿತು. ಜೊತೆಗೆ ಜನರ ಸಂಖ್ಯೆಯೂ ಕೂಡ.

ನೀರಿಗೆ ಬರವಿಲ್ಲದಂತಹ ಪುಣ್ಯ ಭೂಮಿಯೊಂದರಲ್ಲಿ ನೆಲೆಸಲು ಭಾಗ್ಯ ಸಿಕ್ಕಿದ್ದಕ್ಕಾಗಿ ಜುರ್ಹೂಮ್ ಗೋತ್ರದವರು ಕೃತಜ್ಞತೆಯನ್ನು ಸಲ್ಲಿಸುತ್ತಾ ಅಲ್ಲಿ ಬದುಕಬೇಕಿತ್ತು. ಆದರೆ ಅವರು ಆ ಪುಣ್ಯ ಸ್ಥಳದ ಮಹಿಮೆಗೆ ಅಪಚಾರವೆಸಗುವಂತಹ ಅನಾಗರಿಕ ವರ್ತನೆಗಳಲ್ಲಿ ತೊಡಗಿದರು. ಅಲ್ಲಿನ ಪಾವಿತ್ರ್ಯತೆಗೆ ಧಕ್ಕೆಯನ್ನುಂಟು ಮಾಡುವ ಅನುಚಿತ ಕಾರ್ಯಗಳಲ್ಲಿ ಭಾಗಿಯಾದರು. ಈ ಕಾರಣದಿಂದ ಅದು ಅವರ ನಾಶಕ್ಕೆ ಹೇತುವಾಯಿತು.
ಅಧಿಕಾರದ ಮದವು ಅವರೊಳಗಿನ ಅಹಂಕಾರಕ್ಕೆ ಹೆಚ್ಚಿನ ಕಾವು ಕೊಟ್ಟಿತು. ಒಂದು ಕಾಲದಲ್ಲಿ ಅವರನ್ನು ಸೋಲಿಸಲು ಅರಬಿಗಳ ಯಾವ ಗೋತ್ರಗಳಿಗೂ ಸಾಧ್ಯವಿಲ್ಲದಷ್ಟು ಅವರು ಬಲಿಷ್ಠರಾಗಿದ್ದರು. ಅಹಂಕಾರ, ಪ್ರೌಢಿಮೆ, ದೊಡ್ಡಸ್ತಿಕೆ ಅವರನ್ನು ಅಧಃಪತನದ ಕೂಪಕ್ಕೆ ತಳ್ಳಿ ಹಾಕಿತು. ಬರುಬರುತ್ತಾ ಜುರ್ಹೂಮ್ ಗೋತ್ರದ ಪ್ರಭಾವ ಮತ್ತು ಶಕ್ತಿ ಕ್ಷೀಣಿಸುತ್ತಾ ಬಂತು.

ಆದರೂ ಅವರೆಡೆಯಲ್ಲಿ ಮಿಳಾಳ್ ಬಿನ್ ಅಮ್ರ್ ಎಂಬ ವಿವೇಕಶಾಲಿ ವ್ಯಕ್ತಿಯೊಬ್ಬರಿದ್ದರು. ಅವರು ತಮ್ಮ ಗೋತ್ರದವರ ಅಸಹನೀಯ ವರ್ತನೆಯನ್ನು ಕಂಡು ಕಳವಳ ಗೊಂಡರು. ಅವರನ್ನು ಸರಿದಾರಿಗೆ ತರಲು ಪರಿಪರಿಯಾಗಿ ವಿನಂತಿಸುತ್ತಾ ಹಲವು ಉಪದೇಶಗಳನ್ನು ನೀಡಿದರು. ಆದರೆ ಜುರ್ಹೂಮ್ ಗೋತ್ರದವರು ಅದಕ್ಕೆ ಕವಡೆ ಕಾಸಿನ ಬೆಲೆಯನ್ನೂ ನೀಡಲಿಲ್ಲ. ಮಿಳಾಳ್ ಬಿನ್ ಅಮ್ರ್ ರವರ ನಿಲುವು ಗೋತ್ರದ ಹಲವರಿಗೆ ಪಥ್ಯವೆನಿಸಲಿಲ್ಲ. ನಮ್ಮನ್ನು ಇಲ್ಲಿಂದ ಒದ್ದೋಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಅಷ್ಟೊಂದು ಬಲಿಷ್ಠರಾಗಿದ್ದೇವೆ ಎಂಬ ದೊಡ್ಡಸ್ತಿಕೆಯ ಮಾತುಗಳನ್ನಾಡಿ ಅಹಂಕಾರ ಮೆರೆದರು. ಯಾರೆಲ್ಲಾ ತಮ್ಮನ್ನು ಎದುರಿಸುತ್ತಾರೋ ಅವರ ವಿರುದ್ಧವಾಗಿ ಹೋರಾಡಲು ಸಭೆ ಸೇರತೊಡಗಿದರು.
ಅವರ ಪೈಕಿ ದುಷ್ಟ ವ್ಯಕ್ತಿಯಾಗಿದ್ದ ಮಿಜ್'ದ'ಅ್ ಎಂಬವನು ಮಿಳಾಳ್ ಬಿನ್ ಅಮ್ರ್ ಗೆ ವಿರುದ್ಧವಾಗಿ ಬಹಿರಂಗವಾಗಿ ಸವಾಲು ಹಾಕಿದನು. "ಇಲ್ಲಿ ನಮ್ಮನ್ನು ಸೋಲಿಸುವವರು ಯಾರಿದ್ದಾರೆ? ನಮ್ಮ ನಡೆಯ ಬಗ್ಗೆ ಪ್ರಶ್ನಿಸುವ ಒಬ್ಬನೇ ಒಬ್ಬನು ಇಲ್ಲಿ ಹುಟ್ಟಿ ಬಂದಿಲ್ಲ. ಇಲ್ಲಿ ನಾವೇ ಅತ್ಯಂತ ಬಲಿಷ್ಠರು. ಜನಸಂಖ್ಯಾ ಬಲದಲ್ಲೂ ಆಯುಧ ಬಲದಲ್ಲೂ ನಮ್ಮನ್ನು ಮೀರಿಸುವವರು ಯಾರಿದ್ದಾರೆ?" ಎಂದು ಗುಡುಗಿದ.

ಮಿಳಾಳ್ ಬಿನ್ ಅಮ್ರ್ ಗೆ ಇದು ಕೇಳಿ ಸಹಿಸಲಾಗಲಿಲ್ಲ. ತಕ್ಷಣವೇ ಪ್ರತಿಕ್ರಯಿಸಿದರು. " ಪ್ರಭುವಿನ ತೀರ್ಮಾನವೇನಾದರೂ ಜಾರಿಗೊಂಡರೆ ನಿಮ್ಮ ಈ ಭೌತಿಕ ವ್ಯವಸ್ಥೆಗಳೇನೂ ನಿಮಗೆ ಪ್ರಯೋಜನಕ್ಕೆ ಬರಲಾರದು" ಎಂದು ಹೇಳುತ್ತಾ ಅವರಿಗೆ ಉಪದೇಶವನ್ನು ನೀಡಿದರು. ಅವರ ಉಪದೇಶಗಳನ್ನು ಗಾಳಿಗೆ ತೂರಿದ ಆ ಅನಾಗರಿಕರು ಮತ್ತಷ್ಟು ಅಹಿತಕರ ಕೃತ್ಯಗಳನ್ನೆಸಗತೊಡಗಿದರು.
ಪವಿತ್ರ ಕ'ಅ್'ಬಾಲಯದೊಳಗಿನ ಅಮೂಲ್ಯ ಸೊತ್ತುಗಳನ್ನು ರಹಸ್ಯವಾಗಿಯೂ ಬಹಿರಂಗವಾಗಿಯೂ ಕಳವುಗೈಯ್ಯಲಾರಂಭಿಸಿದರು. ಅವರ ಈ ನೀಚತನವು ಮಿತಿಮೀರಿದಾಗ ಮಿಳಾಳ್ ಬಿನ್ ಅಮ್ರ್ ಅದರೊಳಗಿದ್ದ ಎರಡು ಚಿನ್ನದ ಒಡವೆಗಳನ್ನು ಅವರ ಕಣ್ತಪ್ಪಿಸಿ ತೆಗೆದು ಬಹುಜತನದಿಂದ ತನ್ನಲ್ಲೇ ಇರಿಸಿಕೊಂಡರು. ಜೊತೆಗೆ ಹಲವು ಅಮೂಲ್ಯ ಸೊತ್ತುಗಳನ್ನು ಕಳವಾಗದೆ ಸುರಕ್ಷಿತವಾಗಿ ಉಳಿಯಲು ಅವರು ಒಂದು ಉಪಾಯ ಹೂಡಿದರು.
ಜುರ್ಹೂಮ್ ಗೋತ್ರದವರ ವಿಕೃತಿ ಎಲ್ಲೆ ಮೀರುತ್ತಿತ್ತು. ಅನುಗ್ರಹದ ಪ್ರತೀಕವಾಗಿದ್ದ, ಎಂದೂ ಬತ್ತದ ಸೆಲೆಯಂತಿದ್ದ ಝಂಝಂ ಬಾವಿಯು ಅಲ್ಪಾಲ್ಪವಾಗಿ ಮರೆಯಾಗುತ್ತಾ ಬಂತು. ಸದ್ಯದಲ್ಲೇ ಝಂಝಂ ಬಾವಿಯು ಮಣ್ಣಿನಿಂದಾವೃತಗೊಂಡು ಸಂಪೂರ್ಣವಾಗಿ ಮರೆಯಾಗುವುದರಲ್ಲಿತ್ತು. ಮಿಳಾಳ್ ಬಿನ್ ಅಮ್ರ್ ತಮ್ಮ ಕೈವಶವಿದ್ದ ಚಿನ್ನದ ಆಭರಣಗಳನ್ನು ತಮ್ಮ ಮಕ್ಕಳ ಜೊತೆಗೂಡಿ ಒಂದು ಮಧ್ಯ ರಾತ್ರಿಯ ವೇಳೆ ಅದೇ ಝಂಝಂ ಬಾವಿಯಲ್ಲಿ ಹೂತುಬಿಟ್ಟರು.(ಅಖ್'ಬಾರು ಮಕ್ಕಾ)
ನಂತರದ ದಿನಗಳಲ್ಲಿ ಜುರ್ಹೂಮ್ ಗೋತ್ರದವರ ದಾರ್ಷ್ಟ್ಯತನ ಮತ್ತಷ್ಟು ತಾರಕಕ್ಕೇರಿತು. ಅದು ಅವರ ಪತನಕ್ಕೆ ಕಾರಣವಾಗಿ ಬಿಟ್ಟಿತು. ತರುವಾಯ ಅಲ್ಲಿಗೆ ' ಖುಸಾಅ್ ಎಂಬ ಗೊತ್ರದವರ ಪ್ರವೇಶವಾಯಿತು. ಖುಸಾಅ್ ಮತ್ತು ಜುರ್ಹೂಮ್ ಗೊತ್ರದವರ ಮಧ್ಯೆ ಹಲವು ಸಂಘರ್ಷಗಳು ನಡೆದು ಜುರ್ಹೂಮ್ ಎಂಬ ಇಡೀ ಗೊತ್ರವೇ ಕಾಲ ಗರ್ಭದೊಳಗೆ ಸೇರಿ ಬಿಟ್ಟಿತು. ಪವಿತ್ರ ಕ'ಅ್'ಬಾಲಯದ ಸುತ್ತ ಅವರು ಎಸಗುತ್ತಿದ್ದ ಅನಾಗರಿಕ ಕೃತ್ಯಗಳು ಮತ್ತು ಪವಿತ್ರ ಗೇಹಕ್ಕೆ ಅವರು ತೋರುತ್ತಿದ್ದ ಅನಾದರವು ಅವರನ್ನು ಈ ಭೂಮುಖದಿಂದಲೇ ಮರೆಯಾಗಿಸಿ ಬಿಟ್ಟಿತು.
ಖುಸಾಅ್ ವಂಶಜರು ಮಕ್ಕಾದಲ್ಲಿ ಹಲವು ವರ್ಷಗಳ ಕಾಲ ವಾಸಿಸಿದರಾದರೂ ಝಂ ಝಂ ಬಾವಿ ಇರುವ ಸ್ಥಳವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
ತರುವಾಯ ಆ ಪವಿತ್ರ ಬಾವಿಯು ಮತ್ತೆ ಹೊರ ಜಗತ್ತಿಗೆ ಅನಾವರಣ ಗೊಂಡದ್ದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪಿತಾಮಹ ಅಬ್ದುಲ್ ಮುತ್ತಲಿಬರ ಮೂಲಕವಾಗಿತ್ತು. ಅಲ್ಲಾಹನು ಅಬ್ದುಲ್ ಮುತ್ತಲಿಬರಿಗೆ ನಿರಂತರ ಕನಸುಗಳನ್ನು ತೋರಿಸುತ್ತಾ ಝಂಝಂ ಬಾವಿಯನ್ನು ತೋಡುವಂತೆ ಆಜ್ಞಾಪಿಸಿದನು. ಅಬ್ದುಲ್ ಮುತ್ತಲಿಬರು ಹಾರಿಸ್ ಎಂಬ ತಮ್ಮ ಪುತ್ರನ ಜೊತೆಯಲ್ಲಿ ಹಾರೆ, ಗುದ್ದಲಿಯನ್ನು ಹಿಡಿದುಕೊಂಡು ಕನಸಿನಲ್ಲಿ ತಿಳಿಸಲಾದ ಸ್ಥಳದಲ್ಲಿ ಬಾವಿ ತೋಡ ತೊಡಗಿದರು. ಬಾವಿಯ ಕೆಲಸ ಪೂರ್ಣಗೊಂಡು ನೀರಿನ ಒರತೆಯು ಕಾಣಿಸತೊಡಗಿದಾಗ ಅಬ್ದುಲ್ ಮುತ್ತಲಿಬರು ಆನಂದ ತುಂದಿಲರಾಗಿ ಅಲ್ಲಾಹನಿಗೆ ಏರಿದ ಧ್ವನಿಯಲ್ಲಿ ಸುತ್ತಿಗಳನ್ನರ್ಪಿಸಿದರು.

ಅಬ್ದುಲ್ ಮುತ್ತಲಿಬರು ಝಂ ಝಂ ಬಾವಿಯನ್ನು ತೋಡುವ ಮುಂಚೆ ಒಂದು ಹರಕೆ ಹೊತ್ತಿದ್ದರು. ನನಗೆ ಝಂ ಝಂ ಬಾವಿಯ ಮೂಲವು ಲಭಿಸಿದರೆ ಮತ್ತು ನನಗೆ ಜನಿಸುವ ಹತ್ತನೇ ಮಗು ಗಂಡಾದರೆ ಆ ಪೈಕಿ ಓರ್ವ ಗಂಡು ಮಗನನ್ನು ನಿನಗಾಗಿ ನಾನು ಬಲಿಯರ್ಪಿಸುತ್ತೇನೆ.
ಈ ಹರಕೆಯನ್ನು ಮಾಡುವಾಗ ಅಬ್ದುಲ್ ಮುತ್ತಲಿಬರಿಗೆ ಆರು ಪತ್ನಿಯರ ಮೂಲಕ ಹಾರಿಸ್, ಅಬೂತಾಲಿಬ್, ಝುಬೈರ್, ಅಬ್ಬಾಸ್, ಳಿರಾರ್, ಗಯ್'ದಾಖ್, ಹಂಝ, ಅಬೂಲಹಬ್, ಮುಖವ್ವಿಮ್ ಎಂಬ ಒಂಬತ್ತು ಮಕ್ಕಳಿದ್ದರು. ಹತ್ತನೇ ಮಗನಾಗಿ ಫಾತಿಮಾ ಎಂಬ ಪತ್ನಿಯ ಮೂಲಕ ಅಬ್ದುಲ್ಲಾ ಎಂಬ ಗಂಡು ಮಗುವಿನ ಜನನವಾಗುತ್ತದೆ. ಅವರೇ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಗೌರವಾನ್ವಿತ ತಂದೆ.

ಒಂದು ದಿನ ಅಬ್ದುಲ್ ಮುತ್ತಲಿಬರಿಗೆ ತಾವು ಹರಕೆ ಹೊತ್ತ ವಿಚಾರ ನೆನಪಿಗೆ ಬರುತ್ತದೆ. ಹಾಗೆಯೇ ಅವರು ತಮ್ಮ ಹತ್ತು ಮಕ್ಕಳನ್ನು ಕರೆದುಕೊಂಡು ಪವಿತ್ರ ಕ'ಅ್'ಬಾಲಯದ ಬಳಿಗೆ ತೆರಳುತ್ತಾರೆ. ಓರ್ವ ಪುತ್ರನನ್ನು ಬಲಿಯರ್ಪಿಸುತ್ತೇನೆಂದು ಹರಕೆ ಮಾಡಿದ್ದೇನೋ ಸರಿ. ಆದರೆ ಯಾರನ್ನು ಬಲಿಯರ್ಪಿಸುವುದು? ಅಬ್ದುಲ್ ಮುತ್ತಲಿಬರು ಹತ್ತು ಮಕ್ಕಳ ಹೆಸರುಗಳನ್ನು ಬರೆದು ಚೀಟಿ ಎತ್ತಿದರು. ಹೆಸರು ಬಂದದ್ದು ಕಿರಿಯ ಪುತ್ರ ಅಬ್ದುಲ್ಲಾ ರಳಿಯಲ್ಲಾಹು ಅನ್ಹು ರವರದ್ದು! ಅಬ್ದುಲ್ ಮುತ್ತಲಿಬರಿಗೆ ತನ್ನ ಪ್ರೀತಿಯ ಪುತ್ರ ಅಬ್ದುಲ್ಲಾ ರವರನ್ನು ಬಲಿಯರ್ಪಿಸುವುದನ್ನು ನೆನೆದು ಹೃದಯ ಭಾರವಾಯಿತು! ಆದರೆ ಬಲಿಯರ್ಪಿಸದೆ ನಿರ್ವಾಹವಿಲ್ಲ. ಹರಕೆ ಹೊತ್ತಾಗಿದೆ. ಅಬ್ದುಲ್ ಮುತ್ತಲಿಬರು ಪುತ್ರ ಅಬ್ದುಲ್ಲಾ ರಳಿಯಲ್ಲಾಹು ಅನ್ಹು ರವರನ್ನು ಬಲಿಯರ್ಪಿಸಲು ಸನ್ನದ್ಧರಾದರು.
ಆಗ ಅಬ್ದುಲ್ಲಾ ರಳಿಯಲ್ಲಾಹು ಅನ್ಹು ರವರ ತಾಯಿ ಫಾತಿಮಾರವರ ಕುಟುಂಬದ ಮಕ್'ಸೂಮ್ ಗೋತ್ರದವರು ಮತ್ತು ಖುರೈಶೀ ಪ್ರಮುಖರು ಮಧ್ಯೆ ಪ್ರವೇಶಿಸಿ ಬಲಿಯರ್ಪಿಸುವುದನ್ನು ತಡೆದರು. ಈ ಬಲಿಯರ್ಪಣೆಯೇನಾದರೂ ನಡೆದು ಬಿಟ್ಟರೆ ಅದು ನಮ್ಮ ವಂಶಕೊಂದು ಕಪ್ಪು ಚುಕ್ಕೆ. ಅಲ್ಲದೆ ಮುಂದಿನ ಪೀಳಿಗೆಯು ಇದನ್ನು ಮುಂದುವರಿಸುತ್ತಾ ಹೋಗಬಹುದು. ಆದ್ದರಿಂದ ತಾವು ಪುತ್ರನನ್ನು ಬಲಿಯರ್ಪಿಸದಿರಿ "ಎಂದರು.
ಅಬ್ದುಲ್ ಮುತ್ತಲಿಬರು ಪುತ್ರನ ಬಲಿಯರ್ಪಿಸುವ ಕಾರ್ಯದಿಂದ ಹಿಂದೆ ಸರಿದರು. ಅದರ ಬದಲಿಗೆ ನೂರು ಒಂಟೆಗಳನ್ನು ಬಲಿಯರ್ಪಿಸಿದರು. ಈ ಮೂಲಕ ಮೊತ್ತ ಮೊದಲ ಬಾರಿಗೆ ನೂರು ಒಂಟೆಗಳನ್ನು ಬಲಿ ನೀಡಿದ ಹೆಗ್ಗಳಿಕೆಯು ಅಬ್ದುಲ್ ಮುತ್ತಲಿಬರಿಗೆ ಸಂದಿತು. ಈ ಕಾರಣದಿಂದಲೇ ಪ್ರವಾದಿ ಸ್ವಲ್ಲ ಲ್ಲಾಹು ಅಲೈಹಿ ವಸಲ್ಲಮರಿಗೆ ಇಬ್ನ್ ದ್ಸಬೀಹೈನ್ (ಇಬ್ಬರು ಬಲಿ ಅರ್ಪಿತ ತಂದೆಯಂದಿರ ಪುತ್ರ) ಎಂಬ ಹೆಸರು ಬಂದಿರುವುದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಕುಟುಂಬ ಪರಂಪರೆಯು ಪ್ರವಾದಿ ಇಸ್ಮಾಈಲ್ (ಅ) ರವರ ಮೂಲಕ ಪ್ರವಾದಿ ಇಬ್ರಾಹೀಮ್ (ಅ) ರಿಗೆ ತಲುಪುತ್ತದೆ. ಪ್ರವಾದಿ ಇಬ್ರಾಹೀಮ್ (ಅ) ರವರು ಕೂಡಾ ಪುತ್ರ ಇಸ್ಮಾಈಲ್ (ಅ) ರನ್ನು ಬಲಿ ನೀಡಲು ಮುಂದಾಗಿದ್ದರು ತಾನೇ? ಹಾಗಾಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರು "ಇಬ್ನ್ ದ್ಸಬೀಹೈನ್" ಆದರು.

#ಉದ್ದೇಶ_ಈಡೇರಿಸುವ_ಪವಿತ್ರ_ಜಲ
ಝಂಝಮನ್ನು ಯಾವ ಉದ್ದೇಶವನ್ನಿಟ್ಟು ಕುಡಿಯಲಾಗುತ್ತದೋ ಅದು ನೆರವೇರುತ್ತದೆ.(ಇಬ್ನುಮಾಜ, ಹಾಕಿಮ್, ಅಹ್ಮದ್ ಬಿನ್ ಹಂಬಲ್, ಬೈಹಖೀ) ಮುಜಾಹಿದ್ ರಳಿಯಲ್ಲಾಹು ಅನ್ಹು ರವರು ಈ ಹದೀಸನ್ನು ವಿವರಿಸುತ್ತಾ ಹೇಳುತ್ತಾರೆ;"ರೋಗ ಶಮನ ಉದ್ದೇಶದಿಂದ ನೀವು ಝಂಝಂ ಕುಡಿದರೆ ನಿಮಗೆ ರೋಗ ಶಮನವಾಗುತ್ತದೆ. ದಾಹ ನೀಗಬೇಕೆಂಬ ಉದ್ದೇಶದಿಂದ ಕುಡಿದರೆ ದಾಹ ನೀಗುತ್ತದೆ. ಹಸಿವು ನೀಗಬೇಕೆಂಬ ಉದ್ದೇಶದಿಂದ ಕುಡಿದರೆ ಹಸಿವು ನೀಗುತ್ತದೆ" ಝಂಝಮಿನ ಮಹತ್ವವನ್ನರಿತ ಮಹಾತ್ಮರು ತಾವೇನು ಉದ್ದೇಶವನ್ನಿಟ್ಟು ಕುಡಿದರು ಅದು ಈಡೇರಿದ್ದಾಗಿ ಸ್ವತಃ ಅವರೇ ಹೇಳಿರುವುದನ್ನು ಕಾಣಬಹುದು.
ಮಹಾತ್ಮ ರಾದ ಅಲ್ ಹಾಫಿಲ್ ಅಬೂಬಕರುಲ್ ಬಗ್ದಾದಿ ರಳಿಯಲ್ಲಾಹು ಅನ್ಹು ರವರು ಹಜ್ಜ್ ನಿರ್ವಹಿಸಲು ಮಕ್ಕಾಕ್ಕೆ ಹೋಗಿದ್ದಾಗ ಮೂರು ಉದ್ದೇಶಗಳು ಈಡೇರಬೇಕೆಂದು ಝಂಝಮನ್ನು ಕುಡಿಯುತ್ತಾ ಪ್ರಾರ್ಥಿಸಿದರು. ಒಂದನೆಯದು, " ತಾರೀಖು ಬಗ್ದಾದ್ " ಎಂಬ ಗ್ರಂಥ ರಚನೆ. ಎರಡನೆಯದ್ದು, " ಜಾಮಿಉಲ್ ಮನ್ಸೂರ್" ಎಂಬ ಪ್ರಸಿದ್ಧ ಮಸೀದಿಯಲ್ಲಿ ಹದೀಸ್ ಕುರಿತ ದರ್ಸ್ ನಡೆಸುವುದು, ಮೂರನೆಯದ್ದು,ತಾವು ಮರಣ ಹೊಂದಿದರೆ ಮಹಾನ್ ಅಧ್ಯಾತ್ಮಿಕ ಪುರುಷ ಬಿಶ್ರುಲ್ ಹಾಫೀ ರಳಿಯಲ್ಲಾಹು ಅನ್ಹು ರವರ ಪವಿತ್ರ ಸಮಾಧಿಯ ಬಳಿ ಸಮಾಧಿಸ್ಥರಾಗಲು ಭಾಗ್ಯ ದೊರೆಯುವುದು. ಅವರ ಈ ಮಹತ್ವ ಪೂರ್ಣವಾದ ಮೂರು ಆಸೆಗಳನ್ನು ಅಲ್ಲಾಹನು ಈಡೇರಿಸಿದ್ದನು. ( ತಾರೀಖುಲ್ ಇಸ್ಲಾಂ ಲಿದ್ಸಹಬಿ 31/95 ಮುಖ್ತಸರು ತಾರೀಖಿ ದಿಮಶ್ಕ್ - 372)

ಮತೋರ್ವ ಮಹಾತ್ಮರಾದ ಇಬ್ನ್ ಖುಝೈಮಾ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ. ನನಗೆ ಫಲಪ್ರದವಾದ ಜ್ಞಾನವು ಸಿಗಬೇಕೆಂದು ಪ್ರಾರ್ಥಿಸುತ್ತಾ ಝಂಝಂ ಕುಡಿದಿದ್ದೆ. ಅಲ್ಲಾಹನು ನನಗೆ ಸುಜ್ಞಾನವನ್ನು ದಯಪಾಲಿಸಿ ನನ್ನ ಆಸೆಯನ್ನು ಈಡೇರಿಸಿದನು (ತಾರೀಖುಲ್ ಇಸ್ಲಾಂ )
ಮಹಾನ್ ವಿದ್ವಾಂಸರಾದ ಇಮಾಮ್ ಸುಯೂಥೀ ರಳಿಯಲ್ಲಾಹು ಅನ್ಹು ರವರು ಅತಿಮುಖ್ಯವಾದ ಆರು ವಿಚಾರಗಳಲ್ಲಿ ತಮಗೆ ನೈಪುಣ್ಯತೆ ಸಿದ್ಧಿಸಿಕೊಳ್ಳಬೇಕೆಂಬ ಉದ್ದೇಶದಿಂದ ಝಂಝಮನ್ನು ಕುಡಿದಿದ್ದರು. ಆರು ಉದ್ದೇಶಗಳೂ ಈಡೇರಿ ಅವುಗಳಲ್ಲೆಲ್ಲಾ ಅವರು ಆಳವಾದ ಪಾಂಡಿತ್ಯವನ್ನು ಹೊಂದಿದರು. ( ಫೈಳುಲ್ ಬಾರಿ 4- 235) ಮಹಾತ್ಮರಾದ ಮುಆವಿಯಾ ರಳಿಯಲ್ಲಾಹು ಅನ್ಹು ರವರು ಝಂಝಂ ಜಲವನ್ನು ಮುಖಕ್ಕೂ ತಲೆಗೂ ಸುರಿಸಿ ಬರಕತ್ ಪಡೆಯುತ್ತಿದ್ದರು.

ಝಂಝಂನ ಮಹತ್ವ ಬರೆದು ಮುಗಿಸಲಾರದಷ್ಟು ದೀರ್ಘವಿದೆ. ಒಮ್ಮೆ ಸ್ವಹಾಬಿವರ್ಯರಾದ ಸುಫ್ಯಾನ್ ಬಿನ್ ಉಯೈನ್ ರಳಿಯಲ್ಲಾಹು ಅನ್ಹು ರವರು ಒಂದು ಸಭೆಯಲ್ಲಿ ಝಂಝಂನ್ನು ಯಾವ ಉದ್ದೇಶವನ್ನಿಟ್ಟು ಕುಡಿಯುತ್ತಾರೋ, ಅದು ಈಡೇರುವುದು ಎಂಬ ಹದೀಸನ್ನು ಹೇಳಿದರು. ಕೂಡಲೇ ಒಬ್ಬರು ಎದ್ದು ಹೊರಹೋಗಿ ಸ್ವಲ್ಪ ಹೊತ್ತಿನ ಬಳಿಕ ಬಂದು ಕೇಳಿದರು ; ಝಂಝಂ ಕುರಿತು ತಾವು ಹೇಳಿದ ಮಾತು ಸತ್ಯವೇ ?"
"ಹೌದು" ಎಂದರು ಸುಫ್ಯಾನ್ (ರ).
" ಹಾಗಾದರೆ ತಾವು ನನಗೆ ನೂರು ಹದೀಸ್ ಹೇಳಿಕೊಡಬೇಕೆಂಬ ಉದ್ದೇಶದಿಂದ ನಾನು ಈಗ ಝಂಝಂ ಕುಡಿದು ಬಂದಿದ್ದೇನೆ" ಎಂದರು.
ಸುಫ್ಯಾನ್ ಬಿನ್ ಉಯೈನ್ ರಳಿಯಲ್ಲಾಹು ಅನ್ಹು ರವರು ಅವರನ್ನು ಕೂರಿಸಿ ನೂರು ಹದೀಸ್ಗಳನ್ನು ಹೇಳಿಕೊಟ್ಟರು.

#ಝಮ್ #ಝಮ್: #ಎರಡನೆಯ_ಅತಿ_ಶ್ರೇಷ್ಠ_ಜಲ
ವಿಶ್ವದಲ್ಲಿ ಹಲವು ಧರ್ಮಗಳಿದ್ದು, ಪ್ರತಿಯೊಂದು ಧರ್ಮಗಳ ಅನುಯಾಯಿಗಳು ಒಂದೊಂದು ಜಲವನ್ನು ಶ್ರೇಷ್ಠ ಜಲವೆಂದು ಪರಿಗಣಿಸುತ್ತಾರೆ. ಆದರೆ ಅವುಗಳೆಲ್ಲವೂ ಕೊನೆಯ ಸ್ಥಾನದಲ್ಲಿ ನಿಲ್ಲುವ ಸಾಮಾನ್ಯ ನೀರುಗಳಷ್ಟೇ. ಭೂಮುಖದ ಮೇಲೆ ಹರಿಯುವ ನದಿಗಳ ಪೈಕಿ ಮಿಸ್ರ್ ನಲ್ಲಿ ಹರಿಯುವ ನೈಲ್ ನದಿಗೆ ಇಸ್ಲಾಂ ಧರ್ಮವು ನೀಡುವುದು ನಾಲ್ಕನೆಯ ಸ್ಥಾನ.

ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಈ ನದಿಯು ಪುಣ್ಯ ನದಿಯಾಗಿ ಪರಿಗಣಿಸಬಹುದಾದರೂ ಝಂಝಮಿನಷ್ಟು ಶ್ರೇಷ್ಟವಲ್ಲ. ಈ ನದಿಯ ನಂತರದ ಮೇಲಿನ ಸ್ಥಾನ ಅಂದರೆ ಮೂರನೆಯ ಸ್ಥಾನವಿರುವುದು ಪರಲೋಕದಲ್ಲಿ ಲಭಿಸುವ ಹೌಳುಲ್ ಕೌಸರ್ ಎಂಬ ವಿಶಿಷ್ಟ ಜಲಕ್ಕಾಗಿದೆ. ಹಾಲಿಗಿಂತ ಬಿಳುಪು, ಜೇನಿಗಿಂತ ಸಿಹಿ ಮತ್ತು ಕಸ್ತೂರಿಗಿಂತಲೂ ಪರಿಮಳವಿರುವ ಈ ಸುವಿಶೇಷ ಪಾನಿಯಕ್ಕಿಂತಲೂ ಶ್ರೇಷ್ಟ ಜಲವೊಂದಿದ್ದರೆ ಅದು ಝಂಝಂ ಮಾತ್ರ. ಅಂದರೆ ಝಂಝಂ ಎರಡನೇ ಸ್ಥಾನದಲ್ಲಿದೆ ಎಂದಾಯಿತು. ಇನ್ನು ಝಂಝಂಗಿಂತಲೂ ಪುಣ್ಯವುಲ್ಲ ಹಾಗೂ ಮಹತ್ವವುಳ್ಳ ಶ್ರೇಷ್ಟ ಜಲವಾಗಿ ಪರಿಗಣಿಸುವುದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪವಿತ್ರ ಬೆರಳುಗಳೆಡೆಯಿಂದ ಪ್ರವಹಿಸಿದ ಶುದ್ಧ ಜಲವನ್ನಾಗಿದೆ. ಅದಕ್ಕಿಂತಲೂ ಹಿರಿಮೆಯುಳ್ಳ ಜಲ ಈ ಭೂಮುಖದಲ್ಲೂ ಇಲ್ಲ. ನಾಳೆ ಪರಲೋಕದಲ್ಲೂ ಇಲ್ಲ. ಇಮಾಮ್ ಖಲ್ಸೂಬಿ ರಳಿಯಲ್ಲಾಹು ಅನ್ಹು ರವರು ತಮ್ಮ ಹಾಶಿಯತುಲ್ ಖಲ್ಯೂಬಿಯಲ್ಲಿ ಅದನ್ನು ಈ ರೀತಿ ವಿವರಿಸಿದ್ದಾರೆ.
ಶ್ರೇಷ್ಠ ನೀರುಗಳ ಪೈಕಿ ಝಮ್ಝಮ್ ಗೆ ಎರಡನೆಯ ಸ್ಥಾನವಿದ್ದರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬೆರಳುಗಳ ಎಡೆಯಿಂದ ಪ್ರವಹಿಸಿದ ನೀರಿಗೆ ಮೊದಲ ಸ್ಥಾನ. ಮೂರನೆಯ ಸ್ಥಾನ ಹೌಳುಲ್ ಕೌಸರ್ಗಿದ್ದರೆ, ನಾಲ್ಕನೆಯ ಸ್ಥಾನ ಮಿಸ್ರ್ ನ ನೈಲ್ ನದಿಗೆ. ಉಳಿದ ಎಲ್ಲಾ ನೀರುಗಳು ಕೊನೆಯ ಸ್ಥಾನದಲ್ಲಿ ನಿಲ್ಲುತ್ತದೆ. (ಹಾಶೀಯತುಲ್ ಖಲ್ಯೂಬಿ - 1-18).

#ಝಂ #ಝಂ_ನಿಂತು_ಕುಡಿಯಬೇಕೇ?
ಹೀಗೊಂದು ತಪ್ಪು ಕಲ್ಪನೆ ಜನ ಸಾಮಾನ್ಯರಲ್ಲಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಝಂ ಝಮನ್ನು ನಿಂತುಕೊಂಡು ಕುಡಿದರೆಂಬ ಒಂದು ಹದೀಸನ್ನು ಹಿಡಿದುಕೊಂಡು ಝಂ ಝಂ ನೀರನ್ನು ಕುಡಿಯುವಾಗ ನಿಂತುಕೊಂಡು ಕುಡಿಯ ಬೇಕೆಂದು ಕೆಲವರು ವಾದಿಸುತ್ತಾರೆ. ವಾಸ್ತವದಲ್ಲಿ ಇದು ಝಂ ಝಂ ನೀರನ್ನು ನಿಂತುಕೊಂಡು ಕುಡಿಯುವುದಕ್ಕಿರುವ ಪುರಾವೆಯಲ್ಲ. ಬದಲಾಗಿ, ನಿಂತುಕೊಂಡು ಕುಡಿಯುವಂತಹ ಸನ್ನಿವೇಶವು ಎದುರಾದರೆ ನಿಂತುಕೊಂಡು ಕುಡಿಯುವುದು ಅನುವದನೀಯವೆಂದು ವಿವರಿಸುವುದಕ್ಕಾಗಿತ್ತೆಂದು ಮಿರ್ಖಾತ್ ನಲ್ಲಿ ವಿವರಿಸಲಾಗಿದೆ.(ಮಿರ್ಖಾತ್ -8-93)

ಝಮ್ ಝಮ್ ಆಗಲಿ, ಇತರ ನೀರನ್ನಾಗಲಿ ಕುಡಿಯುವಾಗ ಕುಳಿತುಕೊಂಡೇ ಕುಡಿಯಬೇಕೆಂದು ಮಹಾತ್ಮರಾದ ಇಬ್ನ್ ಹಜರ್ ರಳಿಯಲ್ಲಾಹು ಆನ್ಹುರವರು ತಮ್ಮ ತುಹ್ಫಾದಲ್ಲಿ ವಿವರಿಸಿದ್ದಾರೆ.
ಸಾಮಾನ್ಯ ನೀರನ್ನು ಕುಡಿಯುವಾಗ ಪಾಲಿಸಬೇಕಾದ ಶಿಸ್ತು ಹಾಗೂ ಶಿಷ್ಟಾಚಾರಗಳನ್ನು ಝಮ್ಝಮ್ ಜಲವನ್ನು ಕುಡಿಯುವಾಗಲೂ ಪಾಲಿಸಬೇಕು. ವಿಶೇಷತಃ ಖಿಬ್ಲಾಭಿಮುಖ ಮಾಡಿ, ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತಾ ಮೂರು ಗುಟುಕುಗಳಾಗಿ ಝಮ್ ಝಮನ್ನು ಕುಡಿಯಬೇಕೆಂದು ಅಬ್ದುಲ್ಲಾಹಿಬ್ನು ಆಬ್ಬಾಸ್ ರಳಿಯಲ್ಲಾಹು ಆನ್ಹು ವಿವರಿಸಿದ್ದಾರೆ.

#ವಿಜ್ಞಾನಿಗಳನ್ನು_ವಿಸ್ಮಯಗೊಳಿಸಿದ_ಜಲನಿಧಿ
ಝಂಝಂ ನೀರಿನ ಒರತೆಯ ನಿಗೂಢತೆಯನ್ನು ಬೇಧಿಸಲು ಹಲವು ವಿಜ್ಞಾನಿಗಳು ಶತಾಯುಗತಾಯ ಪ್ರಯತ್ನಿಸಿದರಾದರೂ ಯಾರಿಗೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಅವಿರತ ಸಂಶೋಧನೆಯ ಮೂಲಕ ಅವರೆಲ್ಲರೂ ಒಪ್ಪುವ ಸಂಗತಿಯೊಂದೇ ಇದು ಮನುಷ್ಯನಿಗೆ ಕಂಡು ಹಿಡಿಯಲಾಗದ ಜಾಗತಿಕ ಮಹಾ ದೃಷ್ಟಾಂತವೆಂದು. ಜಪಾನಿನ ಮಸಾರು ಎಮೊಟೋ ಎಂಬ ವಿಜ್ಞಾನಿಯೊಬ್ಬರು ಝಂಝಮಿನ ಬಗ್ಗೆ ರಿಸರ್ಚ್ ನಡೆಸಿ, ಐದು ಸಂಪುಟಗಳುಲ್ಲ Messages from Water ಎಂಬ ಉದ್ಗ್ರಂಥವನ್ನೇ ರಚಿಸಿದ್ದಾರೆ. ಅದರಲ್ಲಿ ಅವರು ಝಂಝಮಿನ ಮಹಿಮೆಯ ಬಗ್ಗೆ ವರ್ಣಿಸುತ್ತಾ ಹೀಗೆ ಬರೆದಿದ್ದಾರೆ.
"ಝಮ್ ಝಮಿನಲ್ಲಿರುವಷ್ಟು ಶುದ್ಧತೆ ಮತ್ತು ಸತ್ವಗಳು ವಿಶ್ವದಲ್ಲಿರುವ ಯಾವ ನೀರಿನಲ್ಲೂ ಇಲ್ಲ. ಸಾಮಾನ್ಯ ನೀರಿನ ಸಾವಿರ ಪಟ್ಟು ಸತ್ವಗಳು ಝಮ್ ಝಮ್ ನ ಒಂದು ಹನಿಯಲ್ಲಿದೆ. "

#ಝಂಝಂ_ಉಡುಗೊರೆ
ನಮ್ಮ ಮಿತ್ರರು ಯಾ ಹಿತೈಷಿಗಳಿಗೆ ಉಡುಗೊರೆ ನೀಡುವಾಗ ಝಂ ಝಂ ಜಲವನ್ನೂ ಉಡುಗೊರೆಯಾಗಿ ನೀಡಬಹುದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಝಂ ಝಂ ಜಲವನ್ನು ಉಡುಗೊರೆಯಾಗಿ ನೀಡುತ್ತಿದ್ದರೆಂದು ಗ್ರಂಥಗಳಲ್ಲಿ ಉಲ್ಲೇಖವಿದೆ. ಯಾತ್ರೆ ಹೊರಡುವ ವೇಳೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ರು ಝಂ ಝಂ ಜಲವನ್ನು ವಿಶೇಷವಾಗಿ ತೆಗೆದಿಡುತ್ತಿದ್ದರು. ಪವಿತ್ರ ಸ್ಥಳಗಳಲ್ಲಿ ಅದನ್ನು ಇತರರಿಗೆ ಉಡುಗೊರೆಯಾಗಿ ನೀಡುತ್ತಿದ್ದರು. ಈ ಕಾರಣದಿಂದ ಆಇಶಾ(ರ.ಅ)ರವರು ಯಾತ್ರೆ ಹೊರಡುವ ವೇಳೆಯಲ್ಲಿ ಇದನ್ನು ವಿಶೇಷವಾಗಿ ಗಮನಿಸುತ್ತಿದ್ದರು. ಝಂಝಂ ಅನ್ನು ಯಾವ ಉದ್ದೇಶವನ್ನಿಟ್ಟು ಕುಡಿಯುತ್ತಾರೋ ಅದು ಈಡೇರುವುದೆಂದು ಸ್ವತಃ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರೇ ಹೇಳಿರುವಾಗ ಇದಕ್ಕಿಂತ ದೊಡ್ಡ ಉಡುಗೊರೆ ಬೇರೇನಿದೆ?

#ಬತ್ತದ_ಸೆಲೆ
ಒಂದು ಅಂದಾಜಿನಂತೆ ಝಂ ಝಂ ಬಾವಿಯಿಂದ ಪ್ರತೀ ತಿಂಗಳು 2073 ಕೋಟಿ 60 ಲಕ್ಷ ಲೀಟರ್ ಗಿಂತಲೂ ಮಿಕ್ಕಿದ ನೀರನ್ನು ಹೊರ ತೆಗೆಯಲಾಗುತ್ತಿದೆ. ಪ್ರತೀ ವರ್ಷ ನಡೆಯುವ ಪವಿತ್ರ ಹಜ್ಜ್ ಗೆಂದು ವಿಶ್ವದ ಸುಮಾರು ಅರವತ್ತು ಲಕ್ಷ ಮಂದಿ ಮಕ್ಕಾ ತಲುಪುತ್ತಾರೆ. ಅವರೆಲ್ಲರೂ ಹಜ್ಜ್ ನಿರ್ವಹಿಸಿ ಮರಳುವಾಗ ಕನಿಷ್ಠ ಒಂದು ಲೀಟರ್ ಝಂ ಝಂ ನೀರಿನಂತೆ ತಮ್ಮ ದೇಶಕ್ಕೆ ಕೊಂಡೊಯ್ದರೆ ಬರೋಬ್ಬರಿ ಅರವತ್ತು ಲಕ್ಷ ಲೀಟರ್ ಗಳಾಗುತ್ತವೆ ! ಕನಿಷ್ಠ ಹತ್ತು ಲೀಟರನ್ನಾದರೂ ಕೊಂಡೊಯ್ಯುತ್ತಾರೆಂದಿಟ್ಟುಕೊಂಡರೆ ಎಷ್ಟಾಗುತ್ತದೆಂದು ಎಣಿಸಿ ನೋಡಿ! ಅಷ್ಟೂ ಮಂದಿ ವುಳೂ ಮಾಡಲು, ಸ್ನಾನ ಮಾಡಲು ಬಳಸುವುದೆಲ್ಲವೂ ಇದೇ ಝಂ ಝಂ ನೀರನ್ನು. ಹಾಗಿದ್ದೂ ಪ್ರತಿ ವರ್ಷ ನಡೆಯುವ ಹಜ್ ನ ಸಂಗಮದಲ್ಲಿ ಅದೆಷ್ಟು ನೀರು ಬಳಸಲಾಗಿರಬಹುದು? ಆದರೂ ಝಂ ಝಂ ಎಂದೂ ಬತ್ತದೆ ಮೊಗೆ ಮೊಗೆದು ಕೊಡುತ್ತಿದೆಯೆನ್ನುವುದು ವಿಶ್ವದ ಮಹಾ ಕೌತುಕ!

( 2016 ರ ಅಲ್ ಅನ್ಸಾರ್ ಬಕ್ರೀದ್ ವಿಶೇಷಾಂಕಕ್ಕೆ ಬರೆದ ಲೇಖನ)

- ಎಂ.ಎ. ಇಸ್ಮಾಈಲ್ ನಈಮಿ ಮಂಗಳಪೇಟೆ